ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು. ಪರಮವೀರ ಚಕ್ರವನ್ನು ಜನವರಿ ೨೬ ೧೯೫೦ (ಗಣರಾಜ್ಯೋತ್ಸವ)ದಂದು ಆಗಸ್ಟ್ ೧೫ ೧೯೪೭ (ಭಾರತದ ಸ್ವಾತಂತ್ರ್ಯ ದಿನಾಚರಣೆ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ. ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ. ಸ್ಸೆಕಂಡ್ ಲೆಫ್ಟಿನೆಂಟ್ ಅಥವಾ ಅದ್ಕ್ಕಿಂತ ಕಡಿಮೆ ಹುದ್ದೆಯಲ್ಲಿರುವ ಸೈನಿಕರಿಗೆ ಧನಯೋಗವೂ ಇದೆ. ಪುರಸ್ಕೃತರ ನಿಧನದ ನಂತರ ಅವರ ಪತ್ನಿಗೆ ಅವರ ಮರಣ ಅಥವಾ ಮರುವಿವಾಹದ ತನಕ ಮಾಸಾಶನ ಕೊಡುವ ಪದ್ಧತಿಯೂ ಇದೆ. ಆದರೆ ಈ ಮಾಸಾಶನ್ಅವು ಅತಿ ಕಡಿಮೆಯಾಗಿರುವುದು ವಿವಾದಾತ್ಮಕವಾಗಿದೆ. ಮಾರ್ಚ್ ೧೯೯೯ರಲ್ಲಿ ಇದು ತಿಂಗಳಿಗೆ ರೂ.೧,೫೦೦ ಆಗಿತ್ತು. ಆದರೆ ಬಹಳಷ್ಟು ರಾಜ್ಯಗಳು ಈ ಮಾಸಾಶನಕ್ಕಿಂತ ಹೆಚ್ಚು ದುಡ್ಡು ಈ ಮಹಿಳೆಯರಿಗೆ ಸಲ್ಲುವ ಹಾಗೆ ಮಾಡಿವೆ. == ವಿನ್ಯಾಸ == ಈ ಪದಕವನ್ನು ಶ್ರೀಮತಿ ಸಾವಿತ್ರಿ ಖನೋಲನ್ಕರ್ (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ ಮೇಜರ್ ಸೋಮನಾಥ ಶರ್ಮಾ ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು. ಈ ಪದಕವು ಕಂಚಿನದಾಗಿದ್ದು ದುಂಡಗಿದೆ. ಇದರ ವ್ಯಾಸ ಸುಮಾರು ಮೂರೂವರೆ ಸೆಂ.ಮಿ. ಮಧ್ಯದಲ್ಲಿ ಭಾರತ ದೇಶದ ಲಾಂಛನವಿದೆ. ಇದರ ಸುತ್ತಲೂ ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ. ಪದಕವನ್ನು ಹೊಂದಿದ ರಿಬ್ಬನ್ ೩೨ ಮಿ.ಮಿ. ಉದ್ದವಿದ್ದು ನೇರಳೆ () ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ. == ಪುರಸ್ಕೃತ ಸೈನಿಕರು == ಕಾಕತಾಳೀಯವಾಗಿ ಮೊದಲ ಮತ್ತು ಕೊನೆಯ ಪುರಸ್ಕೃತರು ಹಿಮಾಚಲ ಪ್ರದೇಶದ ಪಾಲಂಪುರ ಎಂಬ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ. == ನೆನಪಿಗಾಗಿ == ೧೯೯೦ರಲ್ಲಿ ದೂರದರ್ಶನದಲ್ಲಿ ಪರಮ ವೀರ ಚಕ್ರ ಎಂಬ ಧಾರಾವಾಹಿ ಪ್ರಸಾರವಾಯಿತು. ಇದು ೧೫ ಕಂತುಗಳಲ್ಲಿ ಮೂಡಿಬಂತು. ಇದರಲ್ಲಿ ಪ್ರಖ್ಯಾತ ಕಲಾವಿದರು ಅಭಿನಯಿಸಿದರು. ಇವರಲ್ಲಿ ಫರೂಖ್ ಶೇಖ್, ಪುನೀತ್ ಇಸ್ಸರ್, ವಿಜಯೇಂದ್ರ ಘಾಟ್ಗೆ, ನಸೀರುದ್ದೀನ್ ಷಾ, ಶಾರೂಖ್ ಖಾನ್ ಮತ್ತು ಅನ್ನು ಕಪೂರ್ ಸೇರಿದ್ದಾರೆ. ಭಾರತದ ಸೇನಾ ದಳಗಳಿಂದ ಈ ಧಾರಾವಾಹಿಯ ನಿರ್ಮಾಣಕ್ಕೆ ಸಂಪೂರ್ಣ ಸಹಾಯ ದೊರೆತಿತು. ಇದರ ಶೀರ್ಷಿಕೆ ಗೀತೆ 'ಶಾನ್ ತೇರೀ ಕಮ್ ನ ಹೋ (ನಿನ್ನ ಖ್ಯಾತಿ ಎಂದೂ ಕಡಿಮೆಯಾಗದಿರಲಿ) ಬಹು ಜನಪ್ರಿಯವಾಯಿತು. ೨೦೨೦ರವರೆಗೆ…ಪರಮವೀರಚಕ್ರ ಪಡೆದ ಸೇನಾನಿಗಳು ೨೦೨೦ರವರೆಗೆ ನಮ್ಮೊಂದಿಗೆ ಇರುವ ವೀರಸೇನಾನಿಗಳು ಸುಬೇದಾರ್ ಮೇಜರ್ ಬಾಣಾ ಸಿಂಗ್, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್. ಇವರಲ್ಲಿ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ನಾಯಕ್ ಸುಬೇದಾರ್ ಸಂಜಯ್ ಕುಮಾರ್ ಇನ್ನು ಸೇನೆಯಲ್ಲಿ ಸೇವಾ ನಿರತರಾಗಿದ್ದಾರೆ. == ಕೆಲವು ಸಂಗತಿಗಳು == ೨೧ ಪುರಸ್ಕೃತರಲ್ಲಿ ೨೦ ಸೈನಿಕರು ಭಾರತೀಯ ಭೂಸೇನೆ ಮತ್ತು ಒಬ್ಬರು ಭಾರತೀಯ ವಾಯುಸೇನೆಯವರಾಗಿದ್ದಾರೆ. ೧೪ ಸೈನಿಕರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪುರಸ್ಕಾರ ದೊರೆತ ಅತಿ ದೊಡ್ಡ ಹುದ್ದೆಯೆಂದರೆ ಲೆಫ್ಟಿನೆಂಟ್ ಕರ್ನಲ್ ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಅತಿ ಕಠಿಣವಾದದ್ದು ಎಂದು ಹೇಳಲಾಗುತ್ತದೆ. == ಹೊರಗಿನ ಸಂಪರ್ಕಗಳು == ಪರಮ ವೀರ ಚಕ್ರ ಪುರಸ್ಕೃತರ ಬಗ್ಗೆ ಭಾರತೀಯ ಭೂಸೇನೆಯ ತಾಣ 2013-08-15 ವೇಬ್ಯಾಕ್ ಮೆಷಿನ್ ನಲ್ಲಿ. ಶ್ರೀಮತಿ ಸಾವಿತ್ರಿ ಖನೋಲ್ಕರ್ ಬಗ್ಗೆ ಮಾಹಿತಿ ಪರಮ ವೀರ ಚಕ್ರದ ಬಗ್ಗೆ ಉಪಯುಕ್ತ ಮಾಹಿತಿ 2008-07-25 ವೇಬ್ಯಾಕ್ ಮೆಷಿನ್ ನಲ್ಲಿ. ಪರಮ ವೀರ ಚಕ್ರದ ಬಗ್ಗೆ ಭಾರತ ರಕ್ಷಕ ತಾಣ 2008-07-11 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತೀಯ ಭೂಸೇನೆಯ ಬಗ್ಗೆ ಕೆಲವು ಸಂಗತಿಗಳು 2009-07-10 ವೇಬ್ಯಾಕ್ ಮೆಷಿನ್ ನಲ್ಲಿ.